ಉಪವಾಸ ನಷ್ಟಕ್ಕೆ ಕಾರಣವಾಗುವ ಸಂಗತಿಗಳು

ಸ್ಥೂಲ ವಸ್ತುಗಳಲ್ಲಿ ಯಾವುದಾದರೊಂದು ದೇಹದೊಳಗೆ ಪ್ರವೇಶಿಸಿದರೆ ಉಪವಾಸ ನಷ್ಟವಾಗುತ್ತದೆ. ಸ್ಥೂಲ ವಸ್ತುಗಳಲ್ಲಿ ಸಣ್ಣದು, ದೊಡ್ಡದು ಎಂಬ ವ್ಯತ್ಯಾಸವಿಲ್ಲ. ಯಾವ ವಸ್ತು ಹೋದರೂ ಉಪವಾಸ ಭಂಗವಾಗುವುದು ನಿಶ್ಚಿತ, ಅದು ಬಾಯಿಯ ಮೂಲಕವೇ ಆಗಬೇಕಿಲ್ಲ. ಹೊಟ್ಟೆಯನ್ನೇ ಸೇರಬೇಕು ಎಂಬ ನಿಯಮವೂ ಇಲ್ಲ. ಕಿವಿ, ಮೂಗು, ಜನನೇಂದ್ರಿಯ, ಮಲದ್ವಾರ ಮೊದಲಾದವುಗಳ ಮೂಲಕ ದೇಹದೊಳಗಿನ ಯಾವ ಭಾಗಕ್ಕೆ ಪ್ರವೇಶಿಸಿದರೂ ಉಪವಾಸ ನಷ್ಟವಾಗುತ್ತದೆ.
ಆದರೆ, ಕಣ್ಣಿಗೆ ಔಷಧಿ ಬಿಡುವುದರಿಂದ ಉಪವಾಸಕ್ಕೆ ಯಾವುದೇ ಭಂಗವುಂಟಾಗುವುದಿಲ್ಲ. ಸ್ಥೂಲ ವಸ್ತು ಪ್ರವೇಶಿಸಿದರಷ್ಟೇ ಉಪವಾಸ ನಷ್ಟವಾಗುತ್ತದೆ. ಪರಿಮಳದಿಂದ ಯಾವುದೇ ಸಮಸ್ಯೆಯಿಲ್ಲ. ಆಹಾರದ ರುಚಿಯನ್ನು ಪರೀಕ್ಷಿಸುವ ಉದ್ದೇಶದಿಂದ ಆಹಾರದ ಸ್ವಾದ ನೋಡಿದರೆ ವ್ರತಕ್ಕೆ ಸಮಸ್ಯೆಯಿಲ್ಲ. ಆದರೆ, ಆ ವಸ್ತು ನಾಲಗೆಯಿಂದ ಕೆಳಗಿಳಿಯಬಾರದು. ರುಚಿ ನೋಡುವಾಗ ಆ ಪದಾರ್ಥ ಮಿಶ್ರಣ ಗೊಂಡಿರುವ ಉಗುಳು ನೀರು ಸಹ ನಾಲಗೆಯಿಂದ ಕೆಳಗಿಳಿಯಬಾರದು.
ಇಂಜೆಕ್ಷನ್‌ನ ಕಾರಣದಿಂದ ವ್ರತ ಭಂಗವಾಗುವುದಿಲ್ಲ. ಆದರೆ, ದಣಿವು ನೀಗಿಸಲು ಗ್ಲೂಕೋಸ್ ಅಥವಾ ಇತರ ವಸ್ತುಗಳನ್ನು ದೇಹದೊಳಗೆ ಕಳುಹಿಸಿ ಶಕ್ತಿ ವರ್ಧಿಸಬಾರದು. ದಣಿವಾರಿಸಿಕೊಳ್ಳಲು ತಲೆಯ ಮೇಲೆ, ದೇಹದ ಮೇಲೆ ನೀರು ಸುರಿಯುವುದರಿಂದ ಯಾವುದೇ ಸಮಸ್ಯೆಯಿಲ್ಲ. ಉಪವಾಸದ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತಲೆಯ ಮೇಲೆ ನೀರು ಸುರಿದುಕೊಂಡಿದ್ದರೆಂದು ಹದೀಸುಗಳಲ್ಲಿದೆ. ಇಬ್ನು ಉಮರ್ ಬಿನ್ ಖತ್ತಾಬ್ ರಳಿಯಲ್ಲಾಹು ಅನ್‌ಹು ವಸ್ತ್ರವನ್ನು ಒದ್ದೆ ಮಾಡಿ ಧರಿಸುತ್ತಿದ್ದರು.
ತಲೆಗೆ ಎಣ್ಣೆ ಹಚ್ಚಿಕೊಳ್ಳುವಂತೆಯೇ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಉಪವಾಸಕ್ಕೆ ಯಾವುದೇ ತೊಂದರೆಯಿಲ್ಲ.
(ಮುಗ್ನಿ /1. ಇಬ್ನು ಜುದಾಮ 3/ 106, ಮುಗ್ನಿ ಮುಹ್‌ತಾಜ್),
ಅನಸ್‌ಬ್ನು ಮಾಲಿಕ್ ಉಪವಾಸದ ಸಂದರ್ಭದಲ್ಲಿ ಕಾಡಿಗೆ ಹಚ್ಚಿಕೊಳ್ಳುತ್ತಿದ್ದರು.
(ಅಬೂದಾವೂದ್ / 2351) ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಕೇಳಿದರು.
ಅಲ್ಲಾಹನ ದೂತರೇ, ನನ್ನ ಕಣ್ಣಿಗೆ ಅನಾರೋಗ್ಯ ಬಾಧಿಸಿದೆ. ನಾನೋ ಉಪವಾಸ ಹಿಡಿದಿದ್ದೇನೆ. ಕಾಡಿಗೆ ಹಚ್ಚಬಹುದೇ?
ಹಚ್ಚಬಹುದು ಎಂದು ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು. (ತುರ್ಮುದಿ/726)
ದೇಹದ ಒಳಗೆ ಪ್ರವೇಶಿಸುವ ವಸ್ತುಗಳಿಂದ ಮಾತ್ರವಲ್ಲ, ದೇಹದಿಂದ ಹೊರಗೆ ಬರುವ ಕೆಲವು ವಸ್ತುಗಳಿಂದಲೂ ಉಪವಾಸ ಅಸಿಂಧುವಾಗುತ್ತದೆ. ಉದಾಹರಣೆಗೆ ವಾಂತಿ ಬಂದರೆ ಉಪವಾಸ ನಷ್ಟವಾಗುತ್ತದೆ. ಆದರೆ, ವಾಂತಿ ಅನಿಯಂತ್ರಿತವಾಗಿದ್ದರೆ ಖಳಾ ಪೂರೈಸಬೇಕಿಲ್ಲ. ಉದ್ದೇಶಪೂರ್ವಕ ವಾಂತಿ ಮಾಡುವವರು ಖಳಾಅ್ ಪೂರೈಸಬೇಕೆಂದು ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ಸಲ್ಲಮರು ಹೇಳಿದ್ದಾರೆ.
(ಅಬೂದಾವೂದ್ 2380, ತುರ್ಮುದಿ/720, ಮಜ್‌ಮೂಅ್ 6/16).
ಒಳಗೆ ಹೋದ ವಸ್ತುಗಳು ಹೊರಗೆ ಬಂದರೆ ಉಪವಾಸ ನಷ್ಟವಾಗುವುದು ನಿಜವಾದರೂ, ಕೆಲವೊಮ್ಮೆ ಅಂತಹ ವಸ್ತುಗಳು ಹೊರಗೆ ಬರುವುದು ಅನಿವಾರ್ಯವಾಗುತ್ತದೆ. ಉದಾಹರಣೆಗೆ, ಪ್ರಾಣಿಗಳೋ, ಕೀಟಗಳೋ ದೇಹದ ಒಳಗೆ ಹೋಗಿದ್ದರೆ, ಅವುಗಳನ್ನು ಹೊರಗೆ ತೆಗೆಯದೆ ಬಿಡುವುದರಿಂದ ಅದು ದೇಹಕ್ಕೆ ವಿಷವಾಗುವ ಸಾಧ್ಯತೆಯಿದ್ದರೆ ಆ ಉಪವಾಸವನ್ನು ನಂತರ ಖಳಾಅ್ ಆಗಿ ಪೂರೈಸಬೇಕು. ಬಾಯಿಯ ಬಾಹ್ಯ ಭಾಗದಲ್ಲಿರುವ ಕಫವನ್ನು ಉಗುಳಲು ಸಾಧ್ಯವಾಗಿದ್ದರೂ ನುಂಗಿದರೆ ಉಪವಾಸ ನಷ್ಟವಾಗುತ್ತದೆ. ಮೂಗಿನಿಂದ ಅಥವಾ ಗಂಟಲಿನಿಂದ ರಕ್ತ ಹೊರಗೆ ಬಂದರೆ ಅಥವಾ ಗಾಯಗೊಂಡು ರಕ್ತ ಬಂದರೆ ಉಪವಾಸಕ್ಕೆ ಯಾವುದೇ ಸಮಸ್ಯೆಯುಂಟಾಗುವುದಿಲ್ಲ. ಆದರೆ, ವಸಡಿನಿಂದ ಹೊರಬರುವ ರಕ್ತವು ಉಗುಳು ನೀರಿನಲ್ಲಿ ಸೇರಿ ಒಳಗೆ ಹೋದರೆ ಉಪವಾಸ ನಷ್ಟವಾಗುತ್ತದೆ.
ಸ್ಖಲನವಾಗದ ರೀತಿಯಲ್ಲಿ ಲೈಂಗಿಕ ಸಂಪರ್ಕ ನಡೆಸಿದರೂ ಉಪವಾಸ ಅಸಿಂಧುವಾಗುತ್ತದೆ. ಮಾತ್ರವಲ್ಲದೆ, ಇದಕ್ಕೆ ಕಠಿಣ ಪ್ರಾಯಶ್ಚಿತ ಕಡ್ಡಾಯವಾಗಿದೆ. ಗುಲಾಮನಿಗೆ ವಿಮೋಚನೆ ನೀಡುವುದು, ಅದು ಸಾಧ್ಯವಾಗದಿದ್ದರೆ ನಿರಂತರ 60 ಉಪವಾಸ ಹಿಡಿಯುವುದು, ಅದು ಸಾಧ್ಯವಾಗದಿದ್ದರೆ 60 ಮಂದಿ ಬಡವರಿಗೆ ಆಹಾರ ಧಾನ್ಯ ನೀಡುವುದು ಹೀಗೆ ಪ್ರಾಯಶ್ಚಿತ ಮಾಡಬೇಕಾಗುತ್ತದೆ. ಇಂದ್ರಿಯ ಸುಖದ ಮೂಲಕ ಸ್ವಲನವಾದಲ್ಲಿ ಉಪವಾಸ ಅಸಿಂಧುವಾಗುತ್ತದೆ. ಆದರೆ, ಸ್ವಪ್ನ ಸ್ಖಲನದಿಂದ ಉಪವಾಸಕ್ಕೆ ಯಾವುದೇ ತೊಂದರೆಯಿಲ್ಲ. ಪತ್ನಿಯನ್ನು ಚುಂಬಿಸುವುದು ತಹ್ರೀಮ್‌ನ (ಹರಾಮ್‌ನ ವಿಧಿಯಿರುವ) ಕರಾಅತ್ ಆಗಿದೆ. ಲೈಂಗಿಕ ಸುಖ ಪಡೆಯುವ ಉದ್ದೇಶದಿಂದಾಗಿದ್ದರೆ ನಿಷಿದ್ಧವಾಗಿದೆ. ಇಮಾಮ್ ಬುಖಾರಿಯವರ 2051ನೇ ಹದೀಸ್‌ನಲ್ಲಿ ಈ ಕುರಿತು ವಿವರವಿದೆ.
ಉಪವಾಸ ನಷ್ಟವಾಗುವ ಕಾರ್ಯಗಳು ಅಚಾನಕ್ ಅಥವಾ ಮರೆವಿನ ಕಾರಣದಿಂದ ಸಂಭವಿಸಿದರೆ ಉಪವಾಸಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ, ನೆನಪಾದೊಡನೇ ಅದರಿಂದ ಹಿಂದಕ್ಕೆ ಸರಿಯಬೇಕು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. ಉಪವಾಸಿಗನು ಮರೆತು ತಿನ್ನುವುದೋ ಕುಡಿಯುವುದೋ ಮಾಡಿದರೆ ಅವನು ಉಪವಾಸವನ್ನು ಪೂರ್ಣಗೊಳಿಸಲಿ, ಅವನನ್ನು ತಿನ್ನಿಸಿದ್ದು, ಕುಡಿಸಿದ್ದು ಅಲ್ಲಾಹನಾಗಿದ್ದಾನೆ.
[ಬುಖಾರಿ/1933, ಮುಸ್ಲಿಮ್/1155]

ಎಂಜೆ ಮುಹಮ್ಮದ್ ರಿಶಾನ್

𝗡𝗢𝗢𝗥𝗨𝗟𝗙𝗔𝗟𝗔𝗛 𝗙𝗢𝗨𝗡𝗗𝗔𝗧𝗜𝗢𝗡(𝗥)

Leave a Comment

Your email address will not be published. Required fields are marked *

You cannot copy content of this page