ದಾನವೂ ಒಂದು ಸತ್ಕರ್ಮ

ದಾನವು ಒಂದು ಶ್ರೇಷ್ಠಕರ್ಮವಾಗಿದೆ. ಸಾಮಾನ್ಯ ದಿನಗಳಲ್ಲಿ ಅದಕ್ಕೆ ಹೆಚ್ಚಿನ ಪ್ರತಿಫಲವಿದೆ. ರಮಳಾನ್ ಮಾಸದಲ್ಲಿ ನೀಡುವ ದಾನಕ್ಕೆ ಇನ್ನೂ ಹೆಚ್ಚಿನ ಪ್ರತಿಫಲ ಲಭ್ಯವಾಗುತ್ತದೆ. ಆದ್ದರಿಂದಲೇ ರಮಳಾನ್ ಆಗಮಿಸುತ್ತಿದ್ದಂತೆ ದಾನ ಮಾಡುವವರ ಸಂಖ್ಯೆಯೂ ವೃದ್ಧಿಸುತ್ತದೆ. ಎಷ್ಟೇ ಜಿಪುಣನಾದರೂ ರಮಳಾನ್ ಮಾಸದಲ್ಲಿ ಸ್ವಲ್ಪವಾದರೂ ದಾನ ಮಾಡಿದರೆ, ಅದು ಆ ಮಾಸದ ವಿಶೇಷತೆಯಾಗಿದೆ. ಈಗ ದಾನಕ್ಕೆ ಸಂಬಂಧಿಸಿದಂತೆ ಸ್ವಲ್ಪ ವಿವರವಾಗಿ ನೋಡೋಣ.
ದಾನ-ಧರ್ಮ ಸಮಾಜದ ಅನಿವಾರ್ಯ ಭಾಗವಾಗಿದೆ. ರಮಳಾನ್ ನಮ್ಮ ಮುಂದಿಡುವ ಅತ್ಯಮೂಲ್ಯ ಸಂದೇಶವೇ ದಾನಧರ್ಮ ಎನ್ನಬಹುದು. ರಮಳಾನ್ ಮಾಸದಲ್ಲಿ ದಾನ ಮಾಡುವುದಕ್ಕೆ ಭಾರೀ ಪ್ರತಿಫಲಗಳು ಲಭ್ಯವಾಗುವ ವಾಗ್ದಾನ ಮಾಡಲಾಗಿದೆ. ರಮಳಾನ್ ಮಾಸದಲ್ಲಿ ಒಂದು ಒಳಿತಿಗೆ ಒಂದು ಕಡ್ಡಾಯ ಆರಾಧನೆಯ ಪ್ರತಿಫಲವಿದೆ. ಒಮ್ಮೆ ಒಬ್ಬರು ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಿದರು.
”ಅತ್ಯುತ್ತಮವಾದ ದಾನ ಯಾವುದು.?”
ರಮಳಾನ್ ಮಾಸದಲ್ಲಿ ಮಾಡುವ ಸ್ವದಖ ದಾನವಾಗಿದೆ ಅತ್ಯುತ್ತಮವಾದುದು. ಎಂದು ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರಿಗೆ ಉತ್ತರಿಸಿದ್ದರು. ಪ್ರಮುಖ ಕರ್ಮಶಾಸ್ತ್ರ ಗ್ರಂಥವಾದ ಫತುಹುಲ್ ಮುಈನ್ ಹೇಳುವ ಒಂದು ವಿಚಾರ ಹೀಗಿದೆ. ರಮಳಾನ್ ಮಾಸದಲ್ಲಿ ದಾನಧರ್ಮಗಳನ್ನು ಹೆಚ್ಚಿಸುವುದು ಸುನ್ನತ್ತಾಗಿದೆ. ಅದರಲ್ಲೂ ಕೊನೆಯ ಹತ್ತರಲ್ಲಿ ಅದು ಪ್ರಬಲ ಸುನ್ನತ್ತಾಗಿದೆ. ಹಾಗೆಯೇ, ತನ್ನನ್ನು ಆಶ್ರಯಿಸಿರುವವರೊಂದಿಗೆ ಹೃದಯ ವೈಶಾಲ್ಯತೆ ತೋರುವುದು ಸುನ್ನತ್ತಾಗಿದೆ. ಬಂಧುಗಳಿಗೆ, ನೆರೆವಾಸಿಗಳಿಗೆ ಉಪಕಾರ ಮಾಡುವುದು ಸುನ್ನತ್ತಾಗಿದೆ. ಇದೆಲ್ಲವೂ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಾಡಿ ತೋರಿಸಿದ, ಕಲಿಸಿದ ವಿಚಾರಗಳಾಗಿವೆ.
ರಮಳಾನ್ ರಿಲೀಫ್‌ಗಳ ಮಾಸ, ಬಡವರಿಗೆ ಭರವಸೆ ತುಂಬಲು ನಮ್ಮ ಮನಸುಗಳನ್ನು ಸಿದ್ದಗೊಳಿಸುವುದೇ ರಮಳಾನ್‌ನ ಅದ್ಭುತಗಳಲ್ಲೊಂದು. ರಮಳಾನ್‌ನ ಆರ್ಥಿಕ ಸಮೃದ್ದಿಯ ಹಿಂದಿರುವುದು ಸ್ವದಖ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ರಮಳಾನ್ ಕಾಲದಲ್ಲಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಾಗುವುದನ್ನು ಕಾಣಬಹುದು. ಇಲ್ಲದವನೆಡೆಗೆ ಇರುವವನ ಕೈ ಚಾಚಲ್ಪಡುವುದೇ ಇದಕ್ಕೊಂದು ಕಾರಣವೆನ್ನಬಹುದು. ವಾಸ್ತವದಲ್ಲಿ ಇಲ್ಲೇನು ನಡೆಯುತ್ತಿದೆ? ಇಲ್ಲದವನು ತನಗೆ ಸಿಕ್ಕಿದ್ದನ್ನು ಮಾರುಕಟ್ಟೆಗೆ ಹೋಗಿ ಉಳ್ಳವನಿಗೇ ಹಿಂದಿರಿಗಿಸುತ್ತಾನೆ. ಶ್ರೀಮಂತನ ಮನೆಯಲ್ಲಿ ಬಡವನು ತಾನು ಪಡೆದದ್ದನ್ನು ಶ್ರೀಮಂತನ ವ್ಯಾಪಾರಿ ಮಳಿಗೆಗಳಿಗೆ ಹೋಗಿ ಕೈ ಬದಲಾಯಿಸುತ್ತಾನೆ ಅಂದರೆ ತನಗೆ ಬೇಕಾದುದನ್ನು ಖರೀದಿಸುತ್ತಾನೆ. ಶ್ರೀಮಂತನಿಗೆ ವ್ಯಾಪಾರವಾಗುತ್ತದೆ. ಬಡವನಿಗೆ ತನಗೆ ಬೇಕಾದುದು ದೊರೆಯುತ್ತದೆ. ಇದರ ಫಲದಿಂದ ವ್ಯಾಪಾರ ಸಜೀವವಾಗುತ್ತದೆ. ಹಣದ ಜಡ ಸ್ಥಿತಿಯ ವಿರುದ್ದ ಕ್ರಿಯೆಯಿದು. ಹಣ ಒಂದು ಕಡೆ ಶೇಖರಣೆಗೊಳ್ಳಲು ಇಸ್ಲಾಮ್ ಸಮ್ಮತಿಸುವುದಿಲ್ಲ. ಅದು ಸದಾ ಸಮಯವು ಚಲಾವಣೆಯಲ್ಲಿರಬೇಕು. ವ್ಯಾಪಾರ ವಹಿವಾಟುಗಳ ಮೂಲಕ, ದಾನಧರ್ಮಾದಿ ಕರ್ಮಗಳ ಮೂಲಕ ರಮಳಾನ್ ನೀಡುವ ಈ ಸಾಮಾಜಿಕ ಸಾಮರಸ್ಯದ ಸಂದೇಶ ಅದೆಷ್ಟು ಶ್ರೇಷ್ಟವಾದುದು.!!
ನೀವೆಲ್ಲರೂ ಅಲ್ಲಾಹನನ್ನೇ ಆರಾಧಿಸಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿ ಮಾಡ ಬೇಡಿ. ಮಾತಪಿತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿರಿ, ಸಂಬಂಧಿಕರೊಂದಿಗೆ, ಅನಾಥರೊಂದಿಗೆ, ನಿರ್ಗತಿಕರೊಂದಿಗೆ, ಆಪ್ತರಾದ ಮತ್ತು ಅಪರಿಚಿತರಾದ ನೆರೆಹೊರೆಯವರೊಂದಿಗೆ, ಅನುಚರರೊಂದಿಗೆ, ಪ್ರಯಾಣಿಕರೊಂದಿಗೆ, ನಿಮ್ಮ ಅಧೀನದಲ್ಲಿರುವ ದಾಸ-ದಾಸಿಯರೊಂದಿಗೆ ಪ್ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿರುವ ಗರ್ವಿಷ್ಠನನ್ನೂ, ಆತ್ಮ ಸ್ತುತಿಗೈಯುವವನನ್ನೂ ಅಲ್ಲಾಹನು ಮೆಚ್ಚುವುದಿಲ್ಲ. (ಅನ್ನಿಸಾಹ್- 36)
ಮನುಷ್ಯ ಅಲ್ಲಾಹನ ಸೃಷ್ಟಿ. ಅವನ ನಿಯಂತ್ರಣಕ್ಕೊಳಪಟ್ಟ ಪರಾವಲಂಬಿ ದಾಸ. ಕರುಣಾಮಯನಾದ ಅಲ್ಲಾಹನು ನೀಡುವ ಕರುಣಾ ರಸವನ್ನು ಹೀರಿ ಅವನು ಲೌಕಿಕ ಜೀವನವನ್ನು ಕಳೆಯುತ್ತಾನೆ. ಲೌಕಿಕವಾಗಿ ಬದುಕುವ ಮನುಷ್ಯ ಸಾಮಾನ್ಯವಾಗಿ ಸುಖಜೀವನವನ್ನು ಆಶಿಸುತ್ತಾನೆ. ಆ ಸುಖ ಜೀವನದಿಂದಲೇ ಜೀವನದ ಪರಮಾರ್ಥವನ್ನು ಹುಡುಕುವುದಕ್ಕೆ ಪ್ರಯತ್ನಿಸುತ್ತಾನೆ. ಆದರೆ, ಅದರಲ್ಲಿ ಆತ ವಿಫಲನಾಗುವುದೇ ಹೆಚ್ಚು. ಕಾರಣ ಆತನ ಸುಖದ ಅಪೇಕ್ಷೆಯು ಆತ ಹುಡುಕುವ ಪರಮಾರ್ಥದೊಂದಿಗೆ ಹೊಂದಿಕೊಳ್ಳುವುದೇ ಇಲ್ಲ. ಇಂತಹ ದ್ವಂದ್ವದಲ್ಲಿಯೇ ಮನುಷ್ಯ ಜೀವನಪೂರ್ತಿ ಕಳೆಯುತ್ತಾನೆ.
ನೀವೆಲ್ಲರೂ ಅಲ್ಲಾಹನನ್ನೇ ಆರಾಧಿಸಿರಿ, ಅವನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿ ಮಾಡಬೇಡಿ. ಎಂದು ಪವಿತ್ರ ಕುರ್‌ಆನ್ ಕಲ್ಪಿಸುವ ಮೂಲಕ ಮನುಷ್ಯನಿಗೆ ಲೌಕಿಕ ಜೀವನದ ಪರಮಾರ್ಥವನ್ನು ತಿಳಿಸಿಕೊಡುತ್ತದೆ. ಅಂದಮಾತ್ರಕ್ಕೆ ಖುರ್‌ಆನ್ ಮನುಷ್ಯನ ಸುಖ ಜೀವನವನ್ನು ನಿರಾಕರಿಸುವುದೂ ಇಲ್ಲ. ಆದರೆ, ಅದಕ್ಕೊಂದು ನೈತಿಕ ಬೇಲಿ ಹಾಕುತ್ತದೆಯಷ್ಟೆ. ಈ ನೈತಿಕ ಬೇಲಿಯೊಳಗೆ ಮನುಷ್ಯ ತನ್ನ ಜೀವನದ ಪರಮಾರ್ಥವನ್ನು ಕಂಡುಕೊಳ್ಳಬಹುದೇ ವಿನಾಃ ಅದರಾಚೆಗೆ ಆತ ಕಂಡುಕೊಳ್ಳುವಂತಹದೇನೂ ಇಲ್ಲ ಮತ್ತು ಅದು ಆತನನ್ನು ಇತರ ಆಮಿಷಗಳ ಮೂಲಕ ದಾರಿ ತಪ್ಪಿಸುತ್ತದೆ. ಒಂದು ಕುಟುಂಬವಾಗಿ, ಒಂದು ಸಮಾಜವಾಗಿ ಬದುಕಲು ಮನುಷ್ಯನಿಗೆ ಇಸ್ಲಾಮೀ ಜೀವನ ಶೈಲಿ ಉತ್ತೇಜಿಸುತ್ತದೆ. ತನ್ನ ಕುಟುಂಬದೊಂದಿಗೆ, ಸಮಾಜದೊಂದಿಗೆ ಹೇಗೆ ವರ್ತಿಸಬೇಕು ಎಂಬ ಇಸ್ಲಾಮಿನ ನೈತಿಕ ಕಲ್ಪನೆಯೊಳಗೆ ಮನುಷ್ಯನ ಸುಖ ಜೀವನದ ಕೀಲಿ ಕೈಯೂ ಇದೆ. ತನ್ನ ಕುಟುಂಬ, ಸಮಾಜದೊಂದಿಗೆ ಪದೇ ಪದೇ ಸಂಘರ್ಷಕ್ಕೆ ಒಳಗಾಗುವ ಮನುಷ್ಯ ಸುಖ ಜೀವನ ನಡೆಸುವುದು ಸಾಧ್ಯವೇ ಇಲ್ಲ. ಮೇಲಿನ ಕುರ್‌ಆನ್ ವಚನವು ಕುಟುಂಬದಲ್ಲಿ, ಸಮಾಜದಲ್ಲಿ ಬದುಕಲು ಮನುಷ್ಯನಿಗೆ ಸೂಕ್ತ ತರಬೇತಿಯನ್ನು ನೀಡುತ್ತದೆ. ಆದರೆ, ಇಲ್ಲಿ ನಮ್ಮ ಮನಸ್ಸಿಗೆ ಬರುವ ಮತ್ತೊಂದು ಜಿಜ್ಞಾಸೆ ಎಂದರೆ ಯಾಕೆ ಕುರ್‌ಆನ್ ಕುಟುಂಬಸ್ತರಾದ ಆಪ್ತ ನೆರೆಹೊರೆಯವರನ್ನು ಮೊದಲಿಗೆ ಪ್ರಸ್ತಾಪಿಸುತ್ತದೆ? ಇದಕ್ಕೆ ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್‌ಹುರವರು ನೀಡುವ ಉತ್ತರ ಹೀಗಿದೆ:
ನಿನಗೆ ಕುಟುಂಬಸ್ಥರಾದ ನೆರೆಹೊರೆಯವರೊಂದಿಗೆ ಮೂರು ಕರ್ತವ್ಯಗಳಿವೆ. ಮೊದಲನೇಯದ್ದು ಅವರು ನಿನ್ನ ಕುಟುಂಬಸ್ಥರು ಎಂಬ ನೆಲೆಯಲ್ಲಿ ನೀನು ಪೂರೈಸಬೇಕಾದ ಕರ್ತವ್ಯ. ಎರಡನೇಯದ್ದು ಮುಸ್ಲಿಮ್ ಎಂಬ ನೆಲೆಯಲ್ಲಿ ನೀನು ಅವರೊಂದಿಗೆ ಪೂರೈಸಬೇಕಾದ ಕರ್ತವ್ಯ. ಮೂರನೇಯದ್ದು ನೆರಹೊರೆ ಎಂಬ ನೆಲೆಯಲ್ಲಿ ನೀನು ಪೂರೈಸಬೇಕಾದ ಕರ್ತವ್ಯ. ಆದರೆ, ಅಪರಿಚಿತರಾದ ನೆರೆಹೊರೆಯವರೊಂದಿಗೆ ನಿನಗಿರುವ ಕರ್ತವ್ಯಗಳು ಎರಡು. ಒಂದು ಮುಸ್ಲಿಮ್ ಮತ್ತೊಂದು ನೆರೆಹೊರೆ.
ಇಹ್ಯಾ ಉಲೂಮುದ್ದೀನ್‌ನಲ್ಲಿ ಇಮಾಮ್ ಗಝ್ಝಾಲೀ ರಳಿಯಲ್ಲಾಹು ಅನ್‌ಹು ಹೇಳುತ್ತಾರೆ:
ಓರ್ವ ಮಹಾತ್ಮರ ಮನೆಯಲ್ಲಿ ಪ್ರತಿನಿತ್ಯ ಇಲಿಯ ಕಾಟ. ಅದೊಂದು ಸಹಿಸಲಸಾಧ್ಯ ಉಪಟಳ. ಸಮಸ್ಯೆ ಪರಿಹಾರಕ್ಕೆ ಒಂದು ಬೆಕ್ಕು ಸಾಕುವಂತೆ ಗೆಳೆಯರೊಬ್ಬರು ಸಲಹೆ ನೀಡಿದರು. ಆಗ ಆ ಮಹಾತ್ಮರು ಹೇಳಿದರು ಬೆಕ್ಕಿನ ಧ್ವನಿ ಕೇಳಿ ಇಲಿಗಳು ಓಡಿ ನೆರೆಯ ಮನೆಯಲ್ಲಿ ಅಡಗಿಕೊಳ್ಳುವುದನ್ನು ನಾನು ಹೆದರುತ್ತೇನೆ. ಕಾರಣ ನನಗೆ ಇಷ್ಟವಿಲ್ಲದ ಕಾರ್ಯ ನನ್ನ ನೆರೆಯವನಿಗೆ ಉಂಟಾಗುವುದನ್ನು ನಾನು ಬಯಸಲು ಸಾಧ್ಯವೇ.?
ದೈನಂದಿನ ಬದುಕಿನಲ್ಲಿ ವ್ಯಕ್ತಿಯೊಬ್ಬ ಇಷ್ಟೊಂದು ಸೂಕ್ಷ್ಮನಾಗುವುದು ಸಾಧ್ಯವೇ.? ಎಂದು ನಾವು ಯೋಚಿಸಬಹುದು. ಆದರೆ, ನಮ್ಮ ಅನೇಕ ಪೂರ್ವಿಕರ ಬದುಕು ಈ ಮಟ್ಟಿಗಿನ ಸೂಕ್ಷ್ಮಜ್ಞತೆಯನ್ನು ಪಡೆದುಕೊಂಡಿತ್ತು. ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಓರ್ವ ವ್ಯಕ್ತಿ ಹೇಳುತ್ತಾರೆ. ಪ್ರವಾದಿವರ್ಯರೇ ಹಗಲು ಉಪವಾಸ, ರಾತ್ರಯಿಡೀ ನಮಾಝ್, ಯಥೇಚ್ಚ ದಾನಧರ್ಮ ನೀಡುವವಳೆಂದು ಹೇಳಲಾಗುತ್ತಿದ್ದ ಓರ್ವ ಸ್ತ್ರೀ ಅವಳ ನಾಲಗೆಯಿಂದ ನೆರೆಹೊರೆಯವರಿಗೆ ಕಿರುಕುಳ ನೀಡುತ್ತಿದಾಳೆ.
ಆಗ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
ಅವಳು ನರಕವಾಸಿಯಾಗಿದ್ದಾಳೆ.
“ಆದರೆ, ನಮಾಝ್, ಉಪವಾಸ, ದಾನಧರ್ಮ ಇತ್ಯಾದಿ ಆರಾಧನೆಗಳನ್ನು ಸಾಕಷ್ಟು ತೊಡಗಿಕೊಳ್ಳದ ಇನ್ನೋರ್ವ ಸ್ತ್ರೀ ಆಕೆ ನೆರೆಹೊರೆಯವರೊಂದಿಗೆ ಸಭ್ಯತೆಯಿಂದಿದ್ದಾಳೆ.”
ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
ಆಕೆ ಸ್ವರ್ಗವಾಸಿಯಾಗಿದ್ದಾಳೆ.
ಓರ್ವ ವ್ಯಕ್ತಿ ಇಬ್ನು ಮಸ್ಊದ್ ರಳಿಯಲ್ಲಾಹು ಅನ್‌ಹುರವರೊಂದಿಗೆ ಹೇಳಿದರು. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕ್ರಮಿಸುವ ನೆರೆಹೊರೆಯೊಂದು ನನಗಿದೆ. ಆಗ ಮಸ್ಊದ್ ರಳಿಯಲ್ಲಾಹು ಅನ್‌ಹುರವರು ಹೇಳಿದರು. ನಿನ್ನೊಂದಿಗಿನ ಕರ್ತವ್ಯದ ವಿಷಯದಲ್ಲಿ ಆತ ಅಲ್ಲಾಹನ ಅಪ್ಪಣೆಯನ್ನು ಮೀರುತಿದ್ದರೂ, ಅವನೊಂದಿಗೆ ನಿನಗಿರುವ ಕರ್ತವ್ಯ ಪ್ರಜ್ಞೆಯಲ್ಲಿ ನೀನು ಅಲ್ಲಾಹನನ್ನು ಅನುಸರಿಸು. (ಇಹ್ಯಾ) ನೆರೆಹೊರೆಯ ವ್ಯಕ್ತಿ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರೂ, ಆತ ನೆರೆಹೊರೆಯವನೆಂಬ ನೆಲೆಯಲ್ಲಿ ನಾವು ಅವನೊಂದಿಗೆ ಸಭ್ಯತೆಯಿಂದ ವರ್ತಿಸಬೇಕೆಂದು ಇಸ್ಲಾಮ್ ಕಲಿಸುತ್ತದೆ. ನಮ್ಮ ಕರ್ತವ್ಯ ಪ್ರಜ್ಞೆಯನ್ನು ಕಂಡಾದರೂ ಆತ ಮುಂದೆ ಒಳ್ಳೆಯ ರೀತಿಯಲ್ಲಿ ವರ್ತಿಸಲು ಸಾಧ್ಯ ಎನ್ನುವುದು ಇಸ್ಲಾಮಿನ ಆಶಯವಾಗಿದೆ.
ಮನೆಕಟ್ಟುವ ಸಂದರ್ಭದಲ್ಲಿ ಉತ್ತಮ ನೆರೆಹೊರೆಯಿರುವ ಕಡೆ ಮನೆ ಕಟ್ಟುವುದು ಉತ್ತಮ ಎನ್ನುತ್ತಾರೆ ಪೂರ್ವಿಕರು. ಇದರಿಂದ ಒಳ್ಳೆಯ ಸಹವಾಸ ದೊರೆತು, ಉತ್ತಮ ಬದುಕನ್ನು ಬದುಕಲು ನೆರವಾಗುತ್ತದೆ. ನಿಮ್ಮ ನೆರೆಹೊರೆಯವ ಕೆಟ್ಟವನಾಗಿದ್ದರೆ ಕೆಲವೊಮ್ಮೆ ಆತನ ಪ್ರಭಾವದಿಂದ ಅಥವಾ ಆತ ಕಿರುಕುಳ ಸಹಿಸಲಾಗದೆ ನೀವು ಕೂಡ ಆತನ ಹಾದಿಯನ್ನೇ ಹಿಡಿಯುವ ಸಾಧ್ಯತೆಯಿದೆ. ಆದ್ದರಿಂದ ಮನೆಕಟ್ಟುವಾಗ ನೆರೆಹೊರೆಯನ್ನು ಗಮನಿಸುವುದು ಕೂಡ ಅವಶ್ಯಕವಾಗಿದೆ.
ಒಮ್ಮೆ ಓರ್ವ ಮಹಾತ್ಮರಲ್ಲಿ ಮಕ್ಕಾ ನಿವಾಸಿಗಳ ಮನಸ್ಸು ಕಲ್ಲಿನಂತಾಗಲು ಮತ್ತು ಮದೀನಾ ನಿವಾಸಿಗಳ ಮನಸ್ಸು ಮೃದುವಾಗಲು ಕಾರಣವೇನೆಂದು ಕೇಳಲಾಯಿತು.
ಮಕ್ಕಾ ನಿವಾಸಿಗಳು ಹಜರುಲ್ ಅಸ್ವದ್‌ನ ಬಳಿ ವಾಸಿಸುತ್ತಾರೆ. ಮದೀನ ವಾಸಿಗಳ ಬಳಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರಿದ್ದಾರೆ. ಎಂದು ಆ ಮಹಾತ್ಮರು ಉತ್ತರಿಸಿದರು. ಅಂದರೆ ನಮ್ಮ ಹತ್ತಿರದ ವ್ಯಕ್ತಿಗಳು ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾರೋ ಅದರ ಪ್ರಭಾವ ಕಾಲಕ್ರಮೇಣ ನಮ್ಮ ಮೇಲೂ ಆಗುತ್ತದೆ ಎಂಬುದು ಸುಳ್ಳಲ್ಲ. ಅಲ್ಲಾಹನು ಮನುಷ್ಯನಲ್ಲಿ ಕೇಳುತ್ತಾನೆ. ಓ ಆದಂ ಸಂತತಿಗಳೇ, ನಾನು ರೋಗಿಯಾಗಿದ್ದಾಗಲೂ ಕೂಡ ನೀನು ನನ್ನನ್ನ ಸಂದರ್ಶಿಸಲಿಲ್ಲವಲ್ಲ.? ಊಟ ಕೇಳಿದಾಗಲೂ ನೀನು ನೀಡಲಿಲ್ಲವಲ್ಲಾ.? ನೀರು ಕೇಳಿದಾಗಲೂ ನೀನದನ್ನು ನನಗೆ ನೀಡಲಿಲ್ಲವಲ್ಲಾ.? ಆಗ ಮನುಷ್ಯನು ಕೇಳುತ್ತಾನೆ.
ಅಲ್ಲಾಹನೇ, ಲೋಕ ಪರಿಪಾಲಕನಾದ ನಿನಗೆ ಆಹಾರ ನೀಡುವುದೋ, ನೀರನ್ನು ಕುಡಿಸುವುದೂ ಸಾಧ್ಯವೇ.?
ಆಗ ಅಲ್ಲಾಹನ ಉತ್ತರ: ನನ್ನ ದಾಸ ನಿನ್ನ ಬಳಿ ನೀರು ಕೇಳಿದಾಗ ನೀನು ಕೊಡಲಿಲ್ಲ. ಅವನಿಗೆ ನೀನು ನೀರು ಕೊಟ್ಟಿದ್ದರೆ ಅವನಲ್ಲಿ ನೀನು ನನ್ನನ್ನು ಕಾಣುತ್ತಿದ್ದಿ.
ರೋಗಿಗಳನ್ನು ಸಂದರ್ಶಿಸುವುದೋ, ಅನಾಥರಿಗೆ, ನಿರ್ಗತಿಕರಿಗೆ ದಾನಧರ್ಮಗಳನ್ನು ನೀಡುವ ಅಲ್ಲಾಹನನನ್ನು ತಲುಪುವುದಕ್ಕಿರುವ ದಾರಿಯಾಗಿದೆ ಎಂಬುದು ಮೇಲಿನ ವಚನದ ತಾತ್ಪರ್ಯವಾಗಿದೆ. ನಮ್ಮ ನೆರೆಹೊರೆಯಲ್ಲಿರುವ ಬಡವರನ್ನು ಅನಾಥರನ್ನು ಮತ್ತು ನಿರ್ಗತಿಕರನ್ನು ನಿರ್ಲಕ್ಷಿಸುವುದು ಇಸ್ಲಾಮ್ ವಿರೋಧಿಸುತ್ತದೆ. ಅವರನ್ನು ಪ್ರೀತಿಸುವುದು ಮುಸ್ಲಿಮರ ಕರ್ತವ್ಯವಾಗಿದೆ. ನೆರೆಹೊರೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ತನ್ನವನಲ್ಲ. ಎಂದು ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದಾರೆ.
ಮುಸ್ಲಿಮನೊಬ್ಬ ಸಂಪತ್ತು ಪಡೆಯುವುದು ತಾನು ತಿಂದುಂಡು ಸುಖಪಡುವುದಕ್ಕಲ್ಲ. ಸುತ್ತಮುತ್ತಲ ಜನರೊಂದಿಗೆ ಹಂಚಿಕೊಂಡು ಆ ಮೂಲಕ ಪಡೆಯುವ ಮಾನಸಿಕ ನೆಮ್ಮದಿಯೇ ಮುಸ್ಲಿಮನ ನಿಜವಾದ ಸುಖ ಜೀವನ. ಸಂಪತ್ತನ್ನು ಕ್ರೋಡೀಕರಿಸುವುದರಲ್ಲಿ ಆಸಕ್ತಿ ತೋರಿಸುವ ಜಿಪುಣರನ್ನು ಅಲ್ಲಾಹನು ಎಂದೂ ಇಷ್ಟಪಡುವುದಿಲ್ಲ.
ಕುರ್‌ಆನ್ ಹೇಳುತ್ತದೆ. ಸ್ವತಃ ಜಿಪುಣತನ ತೋರುವವರನ್ನೂ, ಇತರರು ಜಿಪುಣರಾಗುವಂತೆ ಪ್ರೇರೇಪಿಸುವವರನ್ನು ಅಲ್ಲಾಹನು ತನ್ನ ಅನುಗ್ರಹದಿಂದ ಹೊರಗಿಡುವನು. ತಮಗೆ ದಯಪಾಲಿಸಿದುದನ್ನು ಬಚ್ಚಿಡುವವನನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಅಂತಹ ಕೃತಘ್ನರಿಗಾಗಿ ನಾವು ಅತ್ಯಂತ ಅಪಮಾನಕರವಾದ ಶಿಕ್ಷೆಯನ್ನು ಸಿದ್ದಗೊಳಿಸಿದ್ದೇವೆ.
ಈ ಸೂಕ್ತವನ್ನಿಟ್ಟುಕೊಂಡು ಕೆಲವು ವ್ಯಾಖ್ಯಾನಕಾರರು ಹೇಳುವುದು ನೋಡಿ.
ಸ್ವತಃ ಜಿಪುಣನಾಗಿರುವುದಲ್ಲದೆ, ಇತರರನ್ನು ಜಿಪುಣರಾಗುವಂತೆ ಪ್ರೇರೇಪಿಸುವವನಿಗೆ ಅಲ್ಲಾಹನ ಅನುಗ್ರಹವನ್ನು ನಿಷೇಧಿಸಲಾಗಿದೆ ಮತ್ತು ಆತನಿಗೆ ಕಠಿಣ ಶಿಕ್ಷೆಯನ್ನು ಕಾದಿರಿಸಲಾಗಿದೆ. ಇದನ್ನು ಸ್ಪಷ್ಟಪಡಿಸುವುದಕ್ಕಾಗಿ ಕಾಫಿರ್ ಎಂಬ ಪದವನ್ನು ಉಪಯೋಗಿಸಲಾಗಿದೆ. ಅನ್ಸಾರಿಗಳಾದ ಸ್ವಹಾಬಿಗಳೊಂದಿಗೆ ಕೆಲವು ಜೂದರು ನಿಮ್ಮ ಸಂಪತ್ತನ್ನು ವೆಚ್ಚ ಮಾಡಬೇಡಿ. ನಿಮಗೆ ದಾರಿದ್ರ್ಯ ಉಂಟಾಗಬಹುದು. ಎಂದು ಉಪದೇಶಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಈ ಮೇಲಿನ ಕುರ್‌ಆನ್ ಸೂಕ್ತ ಅವತೀರ್ಣಗೊಂಡಿತು.
ದಾನ ನೀಡುವುದು ಸಾಧ್ಯವಾಗದಿದ್ದರೂ ಕೊನೆಗೆ ಸಾಲವನ್ನಾದರೂ ನೀಡಬೇಕು. ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ. ಇಸ್ರಾಅ್‌ನ ರಾತ್ರಿಯಲ್ಲಿ ಸ್ವರ್ಗದ ಬಾಗಿಲಲ್ಲಿ ಹೀಗೆ ಬರೆಯಲಾಗಿತ್ತು.
ದಾನಕ್ಕೆ ಹತ್ತು ಪುಣ್ಯ, ಸಾಲಕ್ಕೆ ಹದಿನೆಂಟು ಪುಣ್ಯ. ನಾನು ಜಿಬ್ರೀಲ್ ಅಲೈಹಿಸ್ಸಲಾಂರವರ ಬಳಿ ಕೇಳಿದೆ.
“ಇದೇನಿದು ದಾನಕ್ಕಿಂತ ಹೆಚ್ಚು ಪ್ರತಿಫಲ ಸಾಲಕ್ಕೆ.” ಎಂದು.
ಜಿಬ್ರೀಲ್ ಅಲೈಹಿಸ್ಸಲಾಂ ಹೇಳಿದರು: ಕೆಲವೊಮ್ಮೆ ಯಾಚಕ ತನ್ನ ಕೈಯಲ್ಲಿದ್ದದ್ದನ್ನೂ ಬೇಡುತ್ತಾನೆ. ಆದರೆ ಅಗತ್ಯಬಿದ್ದಾಗ ಒಬ್ಬ ಸಾಲ ಕೇಳುವನು.
ಇಷ್ಟೆಲ್ಲಾ ಮಹತ್ವವಿರುವ ದಾನ ಎಂಬ ಪುಣ್ಯಕರ್ಮವನ್ನು ರಮಳಾನ್ ಮಾಸದಲ್ಲಿ ಹೆಚ್ಚಿಸಲು ಆಗ ನಮ್ಮ ಖಾತೆಗೆ ರವಾನೆಯಾಗುವ ಪುಣ್ಯಗಳ ಸಂಖ್ಯೆಯೂ ಹೆಚ್ಚುತ್ತದೆ.

ಅಲ್ಲಾಹನು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ವಿಪತ್ತುಗಳಿಂದ ನಮ್ಮನ್ನು ಕಾಪಾಡಲಿ.. ಆಮೀನ್ ಯಾ ರಬ್ಬಲ್ ಆಲಮೀನ್

ಕೆಎಂ ಜಲೀಲ್ ಕುಂದಾಪುರ

Leave a Comment

Your email address will not be published. Required fields are marked *

You cannot copy content of this page