ಬರಾಅತ್ ಜಾವು ಬರ್ಕತ್ ಜಾವು
ಅರಬೀ ತಿಂಗಳ 8 ನೇಯ ತಿಂಗಳಾಗಿದೆ ಶಅಬಾನ್ ತಿಂಗಳು.
ಆ ತಿಂಗಳ 14 ನೇ ಅಸ್ತಮಿಸಿದ 15 ನೇ ರಾತ್ರಿಯಾಗಿದೆ ಬರಾಅತ್ ರಾತ್ರಿ.
ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಲ್ಲಿ ಬರಾಅತ್ ರಾತ್ರಿಯ ಮಹತ್ವ ವಿವರಿಸಲಾಗಿದೆ.
ಬರಾಅತ್ ಎಂಬುವುದಕ್ಕೆ ಮೋಚನೆ ಎಂದಾಗಿದೆ ಅರ್ಥ.
ಆ ರಾತ್ರಿಯಲ್ಲಿ ನರಕಾಗ್ನಿಯಿಂದ ಹಲವರನ್ನು ಮೋಚಿಸಲ್ಪಡಲಾಗುತ್ತದೆ.ಆದುದರಿಂದಲೇ ಆ ರಾತ್ರಿಗೆ ಬರಾಅತ್ ರಾತ್ರಿ ಎಂಬ ಹೆಸರಿಂದ ಕರೆಯಲ್ಪಡಲಾಗುತ್ತದೆ.
ಮಾತ್ರವಲ್ಲ,
ಲೈಲತುಲ್ ಮುಬಾರಕ,ಲೈಲತುಸ್ಸಕ್ಕ್,
ಲೈಲತುರ್ರಹ್’ಮ ಎಂಬ ಹೆಸರೂ ಆ ರಾತ್ರಿಗೆ ಇದೆ.
(ರೂಹುಲ್ ಬಯಾನ್8/402)
ಅಲ್ಲಾಹನು ಹೇಳುತ್ತಾನೆ,
ಖಂಡಿತವಾಗಿಯೂ ನಾವಿದನ್ನು ಸಮೃದ್ಧಿಯ ರಾತ್ರಿಯಲ್ಲಿ ಅವತರಣೆ ಮಾಡಿದ್ದೇವೆ.ನಿಶ್ಚಯವಾಗಿಯೂ ನಾವು ಮುನ್ಸೂಚನೆ ನೀಡುವವರಾಗಿದ್ದೇವೆ.
ಆ ರಾತ್ರಿಯಲ್ಲಿ ಯುಕ್ತಿ ಪೂರ್ಣವಾದ ಎಲ್ಲಾ ಕಾರ್ಯಗಳನ್ನು ಬೇರ್ಪಡಿಸಲ್ಪಡಲಾಗುತ್ತದೆ.
(ಸೂರಾ ಅದ್ದುಖಾನ್3–4)
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾ ರಾಝೀ(ರ) ಈ ರೀತಿ ವಿವರಿಸುತ್ತಾರೆ,
ಪ್ರಸ್ತುತ ಸೂಕ್ತದಲ್ಲಿ ಹೇಳಿದ ಸಮೃದ್ಧಿಯ ರಾತ್ರಿ ಎಂಬುವುದರ ಉದ್ದೇಶ ಬರಾಅತ್ ರಾತ್ರಿಯಾಗಿದೆಯೆಂದು ಇಖ್’ರಿಮ (ರ)ಮತ್ತು ಇನ್ನಿತರರು ಹೇಳಿದ್ದಾರೆ.
ಅದು ಶಅಬಾನಿನ 15 ನೇ ರಾತ್ರಿಯಾಗಿದೆ.
(ತಫ್ಸೀರುಲ್ ಕಬೀರ್ 27/237)
ಇದೇ ರೀತಿ
*ಜಾಮಿಉಲ್ ಬಯಾನ್ ನ 25/109,
*ರೂಹುಲ್ ಮಆನಿ 13/110,
*ರೂಹುಲ್ ಬಯಾನ್8/402,
*ಅಬುಸ್ಸುಊದ್ 5/553,
*ಸ್ವಾವಿ4/60,
*ಖುರ್’ತುಬೀ16/126 ಮುಂತಾದ ಗ್ರಂಥಗಳಲ್ಲಿಯೂ ಕಾಣಬಹುದಾಗಿದೆ.
“ಯುಕ್ತಿ ಪೂರ್ಣವಾದ ಎಲ್ಲಾ ಕಾರ್ಯಗಳನ್ನು ಬೇರ್ಪಡಿಸಲ್ಪಡಲಾಗುವುದು” ಎಂಬ ಖುರ್ ಆನಿನ ಸೂಕ್ತವನ್ನು ವಿವರಿಸಿ ಇಮಾಮ್ ಖುರ್ತುಬೀ (ರ)ಹೇಳುತ್ತಾರೆ,
ಇಖ್’ರಿಮ(ರ)ಹೇಳಿದರು:ಸೂಕ್ತದಲ್ಲಿ ಹೇಳಿದ ಸಮೃದ್ಧಿಯ ರಾತ್ರಿ ಶಅಬಾನ್ ತಿಂಗಳ 15 ನೇ ದಿನವಾಗಿದೆ.ಆ ರಾತ್ರಿಯಲ್ಲಿ ಒಂದು ವರ್ಷಕ್ಕಿರುವ ಕಾರ್ಯಗಳನ್ನು ತೀರ್ಮಾನಿಸಲ್ಪಡಲಾಗುತ್ತದೆ.ಮರಣಹೊಂದುವವರ ಲಿಸ್ಟ್ ನಿಂದ ಜೀವಿಸುವವರ ಲಿಸ್ಟನ್ನು ಬೇರ್ಪಡಿಸಲಾಗುವುದು.
ಯಾರೆಲ್ಲ ಹಜ್ಜ್ ಕರ್ಮವನ್ನು ನಿರ್ವಹಿಸುವರು ಎಂದು ತೀರ್ಮಾನಿಸಲಾಗುವುದು.
ಎಲ್ಲಾ ಕಾರ್ಯಗಳನ್ನು ತೀರ್ಮಾನಿಸಲ್ಪಟ್ಟ ಬಳಿಕ ಯರನ್ನೂ ಕೂಡಾ ಸೇರಿಸಲಾಗುವುದಿಲ್ಲ ಹಾಗೂ ಕೈ ಬಿಡಲಾಗುವುದಿಲ್ಲ.
ಉಸ್ಮಾನ್ ಬಿನ್ ಮುಗೀರ(ರ) ವರದಿ; ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ಒಂದು ಶಅಬಾನಿನಿಂದ ಇನ್ನೊಂದು ಶಅಬಾನ್ ತನಕದ ಆಯುಷ್ಯವನ್ನು ನಿಶ್ಚಯಿಸಲಾಗುವುದು.
( ಖುರ್’ಥುಬೀ 16/126).
ಇಮಾಮ್ ರಾಝೀ(ರ) ಹೇಳುತ್ತಾರೆ,
ಮನುಷ್ಯರಿಗೆ ಅಲ್ಲಾಹನು ಕರುಣಿಸಿದ ಪ್ರಾಯ,ಆಹಾರ ,ನೀರು ಮುಂತಾದವುಗಳು ಒಂದೇ ರೀತಿಯಲ್ಲಿ ಅಲ್ಲ.ಈ ರೀತಿ ಮನುಷ್ಯನಿಗೆ ಕರುಣಿಸಿದ ಅಲ್ಲಾಹನು ಅವನ ಹಿಕ್ಮತ್ ನಿಂದ ಇದೆಲ್ಲವನ್ನೂ ಲೆಕ್ಕ ಮಾಡಿಟ್ಟಿದ್ದಾನೆ.ಆದುದರಿಂದಲೇ ಹಕೀಂ ಎಂಬ ಅಲ್ಲಾಹನ ವಿಶೇಷತೆಯನ್ನು ಆಲಂಕಾರಿಕವಾಗಿ ಪ್ರಸ್ತುತ ಅನುಗ್ರಹಗಳಿಗೆ ಅಲ್ಲಾಹನು ಪ್ರಯೋಗಿಸಿದ್ದಾನೆ.
(ರಾಝೀ 27/240)
ಖದ್ರ್ ನ ರಾತ್ರಿ ಲೈಲತುಲ್ ಖದ್ರ್ ಅಲ್ಲವೇ?
ಒಂದು ವರ್ಷದ ಲೆಕ್ಕಾಚಾರಗಳು ನಡೆಯುವುದು ರಮಳಾನಿನ ಲೈಲತುಲ್ ಖದ್ರ್ ನಲ್ಲಿ ಎಂದು ಹೇಳಿದವರೂ ಇದ್ದಾರೆ.
ಹಾಗಾದ್ರೆ ಬರಾಅತ್ ರಾತ್ರಿ ಅದು ಹೇಗೆ ನಡೆಯುವವು? ಎಂದು ಕೇಳುವವರಿದ್ದಾರೆ.
ಇಮಾಂ ರಾಝೀ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ:ಎಲ್ಲಾ ಕಾರ್ಯಗಳನ್ನು ದಾಖಲಿಸಲ್ಪಟ್ಟ ಲೌಹುಲ್ ಮಹ್ಫೂಲ್ ನಿಂದ ಒಂದು ವರ್ಷದ ಲೆಕ್ಕಾಚಾರಗಳನ್ನು ಬದಲಿಸಿ ಬರೆಯುವಾಗ ಅದನ್ನು ಬರಾಅತ್ ರಾತ್ರಿ ಆರಂಭಿಸಿ ಲೈಲತುಲ್ ಖದ್ರ್ ಆಗುವಾಗ ಬರೆದು ಪೂರ್ತಿಯಾಗುವವು ಎಂದು ಅಭಿಪ್ರಾಯಪಟ್ಟವರಿದ್ದಾರೆ.
ಆ ಪ್ರಕಾರ ಆಹಾರದ ಲಿಸ್ಟನ್ನು ಮೀಕಾಈಲ್ (ಅ)ರಿಗೂ
ಯುದ್ಧ ಮತ್ತು ಭೂಕಂಪನದ ಲಿಸ್ಟನ್ನು ಜಿಬ್ರೀಲ್(ಅ)ರಿಗೂ ಕರ್ಮಗಳ ಲಿಸ್ಟನ್ನು ಒಂದನೇ ಆಕಾಶದಲ್ಲಿರುವ ಇಸ್ಮಾಯೀಲ್ (ಅ)ರಿಗೂ ವಿಪತ್ತುಗಳ ಲಿಸ್ಟನ್ನು ಮಲಕುಲ್ ಮೌತ್ ನಿಗೂ ವಹಿಸಿಕೊಡಲಾಗುವುದು.
(ರಾಝೀ27/240
ಖುರ್’ಥುಬೀ 16/128
ರೂಹುಲ್ ಬಯಾನ್ 8/404).
ಬರಾಅತ್ ರಾತ್ರಿ ಎಂಬುವುದು ಶ ಅಬಾನ್ 15 ರಾತ್ರಿಯೆಂದು ಅದು ಬಹಳ ಸಮೃದ್ಧಿಯ ರಾತ್ರಿಯೆಂದು ಈ ವಿವರಣೆಯಿಂದ ತಿಳಿಯಿತು.
ಮುನೀರ್ ಸಖಾಫಿ,ಸಾಲೆತ್ತೂರು.