ಮಾನವ ಜೀವಿತದ ಗುರಿ

ವಿಶ್ವವನ್ನು ಸೃಷ್ಟಿಸಿದ ಅಲ್ಲಾಹನು ಮಾನವನ ಮೂಲ ಪಿತ ಆದಂ(ಅ.ಸ)ರಿಂದ ಮಾನವನ ಯುಗವನ್ನು ಆರಂಭಿಸಿದನು.
ತಾಯಿಯ ಗರ್ಭ ಪಾತ್ರಕ್ಕೆ ಅಲ್ಲಾಹನು ಕುರಾನ್ ನಲ್ಲಿ ನೀಡಿದ ಹೆಸರು “ರೆಹಮ್” ಅಲ್ಲಾಹನ ಅನುಗ್ರಹದಿಂದ ತಾಯಿಯ ರೆಹಮ್ ನಲ್ಲಿ ಒಂಬತ್ತು ತಿಂಗಳು ಕಳೆದ ನಂತರ ಪರಿಶುಧ್ಧ ಮಗುವಿನ ರೂಪದಲ್ಲಿ ಮನುಷ್ಯ ಈ ಜಗತ್ತಿಗೆ ಆಗಮಿಸುತ್ತಾನೆ. ಮನುಷ್ಯ ಜಗತ್ತಿಗೆ ಬಂದ ಉದ್ದೇಶವಾದರೂ ಏನು?

ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ ವಮಾ ಖಲಕ್ತಲ್ ಜಿನ್ನ ವಲ್ ಇನ್ಸ ಇಲ್ಲಾ ಲಿಯಹ್ ಬುದೂನ್ ಅಂದ್ರೆ ಸೃಷ್ಟಿಕರ್ತನು ಮಾನವ ಮತ್ತು ಜಿನ್ನ್ ಗಳನ್ನು ಅವನ ಆರಾಧನೆಗೋಸ್ಕರ ಸೃಷ್ಟಿಸಿದ್ದಾನೆ.
ಸೃಷ್ಠಿಕರ್ತನು ಮನುಷ್ಯರನ್ನು ಅತಿಥಿಗಳಾಗಿ ಭೂಮಿಗೆ ಕಳಿಸಿದ್ದಾನೆ. ಮೂಲತ ಮನುಷ್ಯನು ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಜೀವಿಯಾಗಿದ್ದಾನೆ . ನಂತರ ಆತನು ಮಣ್ಣಿಗೇ ಮರಳಿಸಲ್ಪಡುತ್ತಾನೆ. ಈ ಕೆಲಕಾಲದ ಜೀವನದಲ್ಲಿ ಮನುಷ್ಯನ ಜೀವನ ಶೈಲಿ ಹೇಗಿರಬೇಕೆಂದು ಇಸ್ಲಾಂ ಧರ್ಮ ಮತ್ತು ಪ್ರವಾದಿಯವರ ಮೂಲಕ ನಮಗೆ ತೋರಿಸಿ ಕೊಟ್ಟಿದ್ದಾನೆ. ಅದೇರೀತಿ ಶಾಂತಿ ಸಹಿಷ್ಣುತೆ ಸತ್ಯ ಸಂದತೆ ,ಸಹಬಾಳ್ವೆ, ಪ್ರೀತಿ ,ಕರುಣೆಯಿಂದ ಮಾನವಕುಲದವರೆಲ್ಲರೂ ಒಂದೇ ಎಂಬ ಸೌಹಾರ್ದಯುತ ಜೀವನವನ್ನು ರೂಪಿಸಿ ಒಬ್ಬರೊನ್ನಬ್ಬರು ಗೌರವಿಸಿ ಸಹಾಯಹಸ್ತ ನೀಡಿ ಬಾಳುವುದು ನಮಗೆ ಇಸ್ಲಾಂ ಧರ್ಮ ಕಲಿಸಿಕೊಡುವ ನೀತಿಯಾಗಿದೆ. ಅದು ಬಿಟ್ಟು ಪ್ರತಿಯೊಂದು ವಿಷಯದಲ್ಲಿ ಇನ್ನೊಬ್ಬರನ್ನು ಕೀಳು ಭಾವನೆಯಿಂದ ಮನ ನೋಯಿಸಿ ಎಲ್ಲದಕ್ಕಿಂತ ನಾನೇ ಮೇಲು , ಎಲ್ಲಾ ನನ್ನದೇ , ಎಂಬ ಅಹಂಭಾವ ಬೆಳೆಯಬಾರದು.
ತಾಯಿಯ ಗರ್ಭದಲ್ಲಿ 9ತಿಂಗಳು ಕಳೆದು ಬರುವಾಗ ಈ ಅಹಂಭಾವ , ಎಲ್ಲಿತ್ತು .ಬರೀ ನಗ್ನನಾಗಿ ಬಂದಿಲ್ಲವೇ? ಹಾಗೆ ಈ ಲೋಕ ಬಿಟ್ಟು ನಿರ್ಗಮಿಸುವಾಗ ಬರೀ ಬಿಳಿ ಬಟ್ಟೆಯಿಂದ ಮಾತ್ರ ತಾನು ಮಾಡಿದ ಸತ್ಕರ್ಮಗಳೊಂದಿಗೆ ಪರಲೋಕ ಯಾತ್ರೆಗೆ ಹೊರಡ ಬೇಕಲ್ಲವೇ? ಇದು ಪ್ರತಿಯೊಬ್ಬನು ಚಿಂತಿಸಬೇಕಾದ ವಿಷಯವಾಗಿದೆ.

ಮನುಷ್ಯನ ಈ ಐಚ್ಚಿಕ ಬದುಕು ಹೆಚ್ಚೆಂದರೆ ಕೆಲವಾರು ವರ್ಷಗಳು ಮಾತ್ರ ನನ್ನ ಸಮುದಾಯದ ಜನರ ಆಯುಷ್ಯ ಅರವತ್ತು ಎಪ್ಪತ್ತು ವರ್ಷಗಳು ಎಂಬ ಪ್ರವಾದಿ ವಚನ ಇದೆ ಈ ಇಹಲೋಕದ ಬದುಕು ಪರಲೋಕದ ಶಾಶ್ವತ ಬದುಕಿಗೆ ತಯಾರಿ ನಡೆಸುವ ಒಂದು ಪರೀಕ್ಷೆಯಾಗಿದೆ. ಇಲ್ಲಿ ಅಲ್ಲಾಹನ ಸ್ಮರಣೆಯಲ್ಲಿ ದಿನ ಕಳೆದವನು ಅಲ್ಲಿ ಗೆಂದುವನು. ಇಲ್ಲಿ ಅಲ್ಲಾಹನನ್ನು ತಿರಸ್ಕರಿಸಿದವನು ಅಲ್ಲಿ ಪರಾಜಯಗೊಳ್ಳುವನು. ಯಾರ ತೂಕದ ತಟ್ಟೆ ಭಾರವೆನಿಸುವುದೊ ಅವನು ತೃಪ್ತಿಪಡುವನು. ಯಾರ ತೂಕದ ತಟ್ಟೆ ಹಗುರವಾಗುವುದೊ ಆತನು ಅವನ ನಿವಾಸವು (ಹಾವಿಯ) ನರಕವಾಗಿದೆ (ಕುರ್ ಆನ್).
ಮನುಷ್ಯರ ಹಕ್ಕುಗಳಲ್ಲಿ ನಿರ್ಬಂಧಿಸಲಾದ
ಇಸ್ಲಾಂ ನ ಅವಿಭಾಜ್ಯ ಅಂಗಗಳಲ್ಲಿ ಪ್ರಮುಖ ಅಂಗವಾಗಿದೆ ಸದಕ ಅಂದ್ರೆ ದಾನ ನೀಡುವುದು .ಅಲ್ಲಾಹನು ಅನುಗ್ರಹಿಸಿದ ಸಂಪತ್ತನ್ನು ಅವನ ಮಾರ್ಗದಲ್ಲಿ ಖರ್ಚು ಮಾಡದವರನ್ನು ಪರಲೋಕದ ಭಯಾನಕ ಶಿಕ್ಷೆಗೊಳಪಡಿಸಲಾಗುವುದು. ಪರಲೋಕ ವಿಚಾರಣೆಯ ಸಂಧರ್ಭದಲ್ಲಿ ನಿಮಗೆ ಅನುಗ್ರಹಿಸಿದ ಸಂಪತ್ತನ್ನು ಯಾವ ಮಾರ್ಗದಲ್ಲಿ ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಲಾಗುವುದು. ದಾನದ ವಿಷಯವಾಗಿ ಪ್ರವಾದಿ ಸ.ಅ.ಸ.ರವರು ಹೇಳಿದ್ದಾರೆ ಅಸ್ಸದಖತು ರದ್ದುಲ್ ಬಲಾ ಅಂದ್ರೆ ದಾನವು ನಮಗೆ ಬರುವ ಎಲ್ಲಾ ಅನಾಹುತಗಳನ್ನು ತಡೆಯುತ್ತದೆ. ಕೊಡುವ ಕೈ ಕೇಳುವ ಕೈಗಿಂತ ಉತ್ತಮ ಎಂಬ ಪ್ರವಾದಿ ವಚನವು ಇದೆ.ಮತ್ತು ಮನುಷ್ಯನ ಮರಣಾ ನಂತರ ಅವರಿಗಾಗಿ ಪ್ರತಿಫಲ ಸಿಗುವ ಸತ್ಕರ್ಮ ಕಾರ್ಯಗಳಲ್ಲಿ ಒಂದಾಗಿದೆ ದಾನ( ಸದಕತುಲ್ ಜಾರಿಯ)

ಕುಟುಂಬ ಸಂಬಂಧವು ಈಮಾನಿನ ಒಂದು ಅಂಗವಾಗಿದೆ . ಮನುಷ್ಯ ಸಂಘ ಜೀವಿ .ಅವನು ಇತರರೊಂದಿಗೆ ಕೂಡಿ ಬಾಳುವುದು ಅವನ ಅವಶ್ಯಕತೆಗಳ ಅಂಶವಾಗಿದೆ. ಅದಕ್ಕಾಗಿ ಇಸ್ಲಾಂ ಒಂದು ಸ್ವಚ್ಛ ಮತ್ತು ಉತ್ತಮ ಸಮಾಜಕ್ಕಾಗಿ ಸ್ವಸ್ಥ ಕುಟುಂಬ ವ್ಯವಸ್ಥೆಯನ್ನು ಭಧ್ರಪಡಿಸಿದೆ. ಸಣ್ಣ ಕುಟುಂಬಗಳು ಪತಿ ,ಪತ್ನಿ ಮತ್ತು ಮಕ್ಕಳನ್ನು ಒಳಗೊಂಡಿದೆ .ಹಲವೊಮ್ಮೆ ತಂದೆ ತಾಯಿ ಹತ್ತಿರದ ಸಂಬಂಧಿಗಳು ಸೇರಿರುತ್ತಾರೆ. ಕೆಲವು ಕುಟುಂಬಗಳು ಅವಿಭಕ್ತವಾಗಿರುತ್ತದೆ. ಇಸ್ಲಾಂ ಕುಟುಂಬದ ನಿರ್ಮಾಣದಲ್ಲಿ ಸ್ತ್ರೀ ಪುರುಷರಿಬ್ಬರನ್ನೂ ಭಾಗಿದಾರರನ್ನಾಗಿ ಮಾಡಿದೆ .ಆದರೆ ಅದರಲ್ಲಿ ಪುರುಷ ಹೊಣೆಗಾರನಾಗುತ್ತಾನೆ.
ಪುರುಷರು ಸ್ತ್ರೀಯರ ಮೇಲ್ವಿಚಾರಕರಾಗಿರುತ್ತಾರೆ ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಟತೆ ಪ್ರಧಾನ ಮಾಡಿರುವುದರಿಂದ ಮತ್ತು ಪುರುಷರು ತಮ್ಮ ಸಂಪತ್ತು ಖರ್ಚು ಮಾಡುವುದರಿಂದ (ಕುರ್ ಆನ್ 4:34) ಪುರುಷನು ಕುಟುಂಬದ ಯಜಮಾನನಾಗಿ ಆತನಿಗೆ ಶಕ್ತಿ, ಸಾಮರ್ಥ್ಯ, ಮತ್ತು ಹೊಣೆಗಾರಿಕೆಗಳನ್ನು ಪರಿಗಣಿಸಲಾಗಿದೆ.ಈ ವಿಷಯಗಳಲ್ಲಿ ಆದ್ಯತೆಗಳಿರುವುದರಿಂದ ಮನೆಯಲ್ಲಿ ಯಜಮಾನನ ಸ್ಥಾನವಿದೆ. ಸ್ತ್ರೀಯು ಪುರುಷನ ಈ ಸ್ಥಾನಮಾನವನ್ನು ಸ್ವೀಕರಿಸಿ ಸಂತೋಷದಿಂದ ಅನುಸರಿಸಿದಾಗ ಮಾತ್ರ ಕುಟುಂಬ ವ್ಯವಸ್ಥೆ ಉತ್ತಮವಾಗಿ ನಡೆಯಲು ಸಾಧ್ಯ. ಕುಟುಂಬಗಳ ನೆಲೆಯಲ್ಲಿ ಇಸ್ಲಾಂನ ಆದೇಶದ ಪಾಲನೆ ಆದರೆ ಇಡೀ ಸಮಾಜದ ಮೇಲೆ ಅದು ಪ್ರಭಾವ ಬೀರಬಹುದು. ಇಸ್ಲಾಂ ಧರ್ಮದಲ್ಲಿ ವಿವಾಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಿಕಾಹ್ ಅನ್ನು ಪ್ರೀತಿ ಪ್ರೇಮದ ಸಂಬಂಧವೆಂದು ಇಸ್ಲಾಂ ಸಾರುತ್ತದೆ. ಈ ಸಂಬಂಧದ ಮೂಲಕ ಓರ್ವ ಪುರುಷ ಓರ್ವ ಮಹಿಳೆಯನ್ನು ವಿವಾಹವಾಗುತ್ತಾನೆ ಅವರ ಮಧ್ಯೆ ಪ್ರೀತಿಯುಂಟಾಗಿ ಅವರಿಬ್ಬರ ದಾಂಪತ್ಯ ಜೀವನವು ಆರಂಭವಾಗುತ್ತದೆ. ದಂಪತಿಗಳ ಮಧ್ಯೆ ಉತ್ತಮ ಸಂಬಂಧ ಕಾಯ್ದಿರಸಬೇಕೆಂದು ಕುರ್ ಆನ್ ಈ ಪದಗಳಲ್ಲಿ ವಿವರಿಸಿದೆ ಅವರು ನಿಮಗೆ ಉಡುಪಾಗಿರುವರು ,ನೀವು ಅವರಿಗೆ ಉಡುಪಾಗಿರುವಿರಿ(ಕುರ್ ಆನ್ 2:187)

ಮನುಷ್ಯನ ಇನ್ನೊಂದು ಸತ್ಕರ್ಮಗಳಲ್ಲಿ ಒಂದಾಗಿದೆ , ತಕ್ವಾ ಅಂದ್ರೆ ದೇವ ಭಯ .ಅಲ್ಲಾಹನಿಗೆ ಭಯ ಪಡುವುದು .ಪವಿತ್ರ ಕುರ್ ಆನ್ ನಲ್ಲಿ ಪ್ರಸ್ತಾಪಿಸಲಾದ ಸೂಕ್ತ ಯಾ ಅಯ್ಯುಹಲ್ಲಝೀನ ಆಮನೂ ವತಕ್ಕುಲ್ಲಾಹ ಓ ಜನರೇ ನೀವು ನಿಮ್ಮ ಪ್ರಭುವನ್ನು ಭಯಪಡಿರಿ.(59:18) ಕುರ್ ಆನ್. ಪ್ರತಿಯೊಬ್ಬನು ತಾನು ನಾಳೆಗೆ ಏನು ಸಿಧ್ಧ ಪಡಿಸಿದ್ದೇನೆಂಬುದನ್ನು ನೋಡಲಿ . ಪ್ರತಿಯೊಂದು ಆತ್ಮವು ಎಚ್ಚೆತ್ತು ಕೊಳ್ಳಲಿ ನಾವು ಪರಲೋಕಕ್ಕಾಗಿ ಏನೆಲ್ಲಾ ತಯಾರಿಯಲ್ಲಿದ್ದೇವೆ ಎಂದು. ನಿಶ್ಚಯವಾಗಿಯು ನಾವು ಮಾಡುವ ಸಕಲ ಕರ್ಮಗಳನ್ನು ಅಲ್ಲಾಹನು ಬಲ್ಲವನಾಗಿರುತ್ತಾನೆ. ಯಾವುದೇ ಒಬ್ಬ ಮನುಷ್ಯ ಒಂದು ಸಾಸಿವೆ ಕಾಳಿನಷ್ಟು ಒಳ್ಳೆಯ ಕಾರ್ಯ ಮಾಡಿದರೆ ಆತನಿಗೆ ಅದಕ್ಕೆ ತಕ್ಕ ಪ್ರತಿಫಲ ದೊರೆಯುವುದು ಮತ್ತು ಯಾವುದೇ ಮನುಷ್ಯನು ಒಂದು ಸಾಸಿವೆ ಕಾಳಿನಷ್ಷು ಕೆಟ್ಟ ಕಾರ್ಯ ಕೈಗೊಂಡರೆ ಅದಕ್ಕೆ ತಕ್ಕುದಾದ ಶಿಕ್ಷೆಯು ಲಭಿಸುವುದು ಎಂದು ಕುರಾನಿನ
ಅಧ್ಯಾಯ “ಝಿಲ್ ಝಿಲ್ ನಲ್ಲಿ ಪ್ರಸ್ತಾಪಿಸಲಾಗಿದೆ. ನಾಳೆ ಪರಲೋಕದಲ್ಲಿ ನಮ್ಮ ಪ್ರತಿಯೊಂದು ಅವಯವಗಳು ನಮ್ಮ ಕೆಟ್ಟ ಕಾರ್ಯದ ಬಗ್ಗೆ ಸಾಕ್ಷಿ ನೀಡಲಿವೆ(36:65)
ಮನುಷ್ಯನು ತಾನು ಮಹಾ ಜ್ಞಾನಿಯೆಂದೂ ಆರಾಧಕನೆಂದೂ ,ದಾನಿಯೆಂದೂ, ಜಂಭ ಪಡಬಾರದು.
ಸಮಯವನ್ನು ಧರ್ಮ ನಿಷಿಧ್ಧ ಕಾರ್ಯದಲ್ಲಿ ತೊಡಗಿಸಿ ಕೊಳ್ಳದೇ ಇಸ್ಲಾಮಿನ ಚೌಕಟ್ಟಿನಲ್ಲಿ ಬಾಳಲು ಶ್ರಮಿಸ ಬೇಕು.ಇಸ್ಲಾಮಿನ ಬಹುಮುಖ್ಯ ಕಡ್ಡಾಯ ಆರಾಧನ ಕಾರ್ಯಗಳಾದ ನಮಾಝನ್ನು ನಾವು ತಪ್ಪದೇ ನಿರ್ವಹಿಸ ಬೇಕು ಮತ್ತು ನಮ್ಮ ಮಕ್ಕಳನ್ನು ಕೂಡ ಐದು ವಕ್ತ್ ನ ನಮಾಝ್ ನಲ್ಲಿ ಸ್ಥಿರ ಗೊಳಿಸುವ ಪ್ರಯತ್ನ ಮಾಡಬೇಕು . ರಬ್ಬೀ ಜಅಲ್ನೀ ಮುಖೀಮು ಸ್ಸಲಾತ್ ವಮಿನ್ ಝುರ್ರಿಯತಿ ರಬ್ಬನಾ ತಕಬ್ಬಲ್ ದುಆ ಪ್ರವಾದಿ ಇಬ್ರಾಹಿಂ ಅ.ಸ.ರು ತನ್ನ ಸಂತಾನಕ್ಕಾಗಿ ಪ್ರಾರ್ಥಿಸಿದ ಪ್ರಾರ್ಥನೆಯನ್ನು ನಾವು ಈ ಸಂಧರ್ಭ ನೆನಪಿಸಬಹುದು. ಹಾಗೆಯೇ ವರ್ಷಕ್ಕೊಂದು ಸಲ ಬರುವ ರಮ್ಝಾನ್ ತಿಂಗಳಿನ ಉಪವಾಸ ,ಝಕಾತ್ ,ಹಜ್ಜ್ ಇವುಗಳನ್ನು ಬಹಳ ಜವಾಬ್ದಾರಿಯಿಂದ ನನ್ನ ಪ್ರಭು ನನ್ನಿಂದ ಸಂತೃಪ್ತ ಗೊಳ್ಳಲಿ ಎಂಬ ಭಯಭಕ್ತಿಯಿಂದ ಇದು ನಮ್ಮ ಕೊನೆಯ ಆರಾಧನೆ ಎಂಬಂತೆ ಪೂರೈಸಬೇಕು.ಕಾರಣ ಎಲ್ಲಿ ಯಾವಾಗ ಮರಣ ಸಂಭವಿಸಬಹುದೆಂದು ಎಂದು ನಮಗಾರಿಗೂ ತಿಳಿಯದು. ನಾವು ಈಗ ದಿನ ಬೆಳಗಾಗುತ್ತಲೇ ಅದೆಷ್ಟೊ ಜನರು ಅಪಘಾತ ಅವಘಡ ರೋಗ ಬಾದಿತರಾಗಿ ಮರಣಿಸುವ ವಿಷಯಗಳನ್ನು ಪತ್ರಿಕೆ ಮಾಧ್ಯಮಗಳಲ್ಲಿ ಕಂಡಿರ ಬಹುದು .ಅದರಲ್ಲಿ ಸಣ್ಣ ಮಕ್ಕಳೂ ,ಯೌವನಾವಸ್ಥೆ ತಲುಪಿದವರೂ ,ಪ್ರಾಯದವರೂ ಸೇರಿರುತ್ತಾರೆ .ಮರಣಕ್ಕೆ ವಯಸ್ಸಿನ ಮಿತಿಯಿಲ್ಲ. ಕರೆಯದೇ ಬರುವ ಅಥಿತಿಯಂತೆ ಮರಣವು ನಮ್ಮ ಬೆನ್ನ ಹಿಂದೆಯೇ ಇದೆ.
ಹಝರತ್ ಅಬ್ದುಲ್ಲಾಹಿಬ್ನು ಉಮರ್ (ಅ.ರ) ರವರು ಹೇಳಿದ್ದರು ರಾತ್ರಿಯಾದರೆ ಬೆಳಗಾಗುದನ್ನು ನಿರೀಕ್ಷಿಸಬೇಡ, ಬೆಳಗಾದರೆ ರಾತ್ರಿಯಾಗುವುದನ್ನು ಕಾಯಬೇಡ, ಮರಣಕ್ಕಾಗಿ ಸಿಧ್ಧನಾಗಿರು .ಹಾಗಾಗಿ ನಮ್ಮ ಎಲ್ಲಾ ಸಂತೋಷಗಳನ್ನು ಮುರಿದು ಬಿಡುವ ಮರಣವನ್ನು ನಾವು ಹೆಚ್ಚು ಹೆಚ್ಚು ಸ್ಮರಿಸಬೇಕು.
ಇನ್ನೊಂದು ಹದೀಸಿನಲ್ಲಿ ಈ ರೀತಿ ಹೇಳಲಾಗಿದೆ .ನೀವು ನಮಾಝನ್ನು ಸಂಸ್ಥಾಪಿಸಿ ಅದು ಖಳಾ ಆಗುವ ಮೊದಲು ಮತ್ತು ನೀವು ಕ್ಷಮೆಯನ್ನು ಕೇಳಿರಿ ಮರಣವು ನಿಮ್ಮನ್ನು ಸಮೀಪಿಸುವ ಮೊದಲು. ಮುಸಲ್ಮಾನರಾದ ನಾವು ಈ ಲೋಕದಲ್ಲಿ ಒಬ್ಬ ಯಾತ್ರಿಕನಂತೆ ಜೀವಿಸಬೇಕೆಂದು ಪ್ರವಾದಿ ಸ.ಅ.ಸ. ಆದೇಶಿಸಿದ್ದಾರೆ. ಮರಣ ನಂತರ ಮತ್ತು ಪ್ರಯತ್ನ ದ ಅವಕಾಶ ಯಾರಿಗೂ ಸಿಗದು.
ಕಾಲವು ಮನುಷ್ಯನನ್ನು ಬಹಳ ವೇಗವಾಗಿ ಅಂತ್ಯದ ಕಡೆಗೆ ಕೊಂಡೊಯ್ಯುತ್ತದೆ . ಆದರೆ ಮನುಷ್ಯ ತನಗೆ ಏನು ಅರಿವಿಲ್ಲದಂತೆ ಈ ಜೀವನದ ಸುಖದಲ್ಲಿ ಮೆರೆತು ಜೀವಿಸುತ್ತಿದ್ದಾನೆ. ತನ್ನ ಅಮೂಲ್ಯ ಸಮಯವನ್ನು ಬೇಡದ ಚಟುವಟಿಕೆಗಳಲ್ಲಿ ವ್ಯರ್ಥ ಗೊಳಿಸುತ್ತಿದ್ದಾನೆ.
ಅಲ್ಲಾಹನ ಪವಿತ್ರ ಗ್ರಂಥ ಕುರ್ ಆನಿನಲ್ಲಿ ಪ್ರತಿಯೊಬ್ಬ ಮುಸ್ಲಿಮನು ಉತ್ತಮವಾಗಿ ಜೀವನ ನಡೆಸುವ ಪ್ರತಿಯೊಂದು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ .ಉದಾ:: ಸಾಲದ ಲೇವಾದೇವಿ,ಬಡ್ಡಿಯ ವ್ಯವಹಾರದ ಕುರಿತು, ವಿವಾಹ ,ವಿಚ್ಛೇಧನ, ವಾರೀಸು ಸೊತ್ತು ,ಪೋಷಕರ ಹಕ್ಕುಗಳು ,ಮಕ್ಕಳ ಹಕ್ಕುಗಳು,ದಾನಧರ್ಮ,ಹೀಗೆ ಇನ್ನು ಅನೇಕ ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ .ಹಾಗಾಗಿ ಪ್ರತಿಯೊಬ್ಬರು ಇಸ್ಲಾಮಿನ ಚೌಕಟ್ಟಿನ್ನಲ್ಲಿದ್ದು ಕೊಂಡು ಕುರ್ ಆನ್ ಹದೀಸ್ ಗಳನ್ನು ಮನದಟ್ಟು ಮಾಡಿಕೊಂಡು ಪ್ರವಾದಿ ಸ.ಅ.ಸ ರ ಸುನ್ನತನ್ನು ಅಳವಡಿಸಿಕೊಂಡರೆ ಸುಂದರವಾದ ಸರಳ ಜೀವನವನ್ನು ನಡೆಸಬಹುದು.
ಈಗಲೂ ಕಾಲ ಮಿಂಚಿಲ ಅಂತ್ಯ ಕಾಲ ಸಮೀಪಿಸುತ್ತಿರುವ ಈ ಕೊನೆ ಕಾಲದಲ್ಲಿ ಅಲ್ಲಾಹನು ಮತ್ತು ಆತನ ಪ್ರವಾದಿಯವರು ತೋರಿಸಿಕೊಟ್ಟ ಸತ್ಯದ ಹಾದಿಯಲ್ಲಿ ನಡೆಯುವಂತೆ ನಮ್ಮನ್ನು ಅಲ್ಲಾಹು ಸುಬ್ಹಾನವುತ್ತಅಲ ಅನುಗ್ರಹಿಸಲಿ . ಇಹಲೋಕದಲ್ಲೂ ಪರಲೋಕದಲ್ಲೂ ಸರ್ವವಿಧದ ಆಪತುಗಳಿಂದ ಪಾರುಮಾಡಿ ನಮ್ಮ ಮೇಲೆ ಮಗ್ಫಿರತ್ ಕರುಣಿಸಿ ನಮ್ಮನ್ನು ಸ್ವರ್ಗದಲ್ಲಿ ಒಂದು ಗೂಡಿಸಲಿ.. ಆಮೀನ್ ಯಾ ರಬ್ಬಲ್ ಆಲಮೀನ್.

ಸಲ್ಲಲ್ಲಾಹು ವಲಾಮು ಹಮ್ಮದ್ ಸಲ್ಲಲ್ಲಾಹು ವಲೈವ ಸಲ್ಲಂ

ಲೇಖಕರು:
ಝಲೇಖ ಮುಮ್ತಾಝ್ ಮಂಕಿಸ್ಟ್ಯಾಂಡ್ ಮಂಗಳೂರು

NOORULFALAH FOUNDATION(R)

Leave a Comment

Your email address will not be published. Required fields are marked *

You cannot copy content of this page