ಲೈಲತುಲ್ ಖದ್‌ರ್

ಲೈಲತುಲ್ ಖದ್‌ರ್

ಪುಣ್ಯಗಳಿಂದ ತುಂಬಿದ ರಮಳಾನ್‌ನಲ್ಲಿ ಪುಣ್ಯದ ಮೇಲೆ ಪುಣ್ಯಗಳಿರುವ ಒಂದು ರಾತ್ರಿಯಿದೆ. ಅದುವೇ ಲೈಲತುಲ್ ಖದ್‌ರ್! ರಮಳಾನ್‌ನ ರಾತ್ರಿಗಳಿಗೆ ಹಗಲುಗಳಿಗಿಂತಲೂ ಹೆಚ್ಚು ಪ್ರಭೆಯಿದೆ. ಅವುಗಳಲ್ಲೂ ಶ್ರೇಷ್ಟವಾದ ರಾತ್ರಿ ವಿಧಿ ನಿರ್ಣಯ ರಾತ್ರಿಯಾದ ಲೈಲತುಲ್ ಖದ್‌ರ್! ರಮಳಾನ್‌ನ ಮೊದಲ ಹಾಗೂ ಮಧ್ಯದ ಹತ್ತುಗಳಿಗಿಲ್ಲದ ಶ್ರೇಷ್ಠತೆ ಕೊನೆಯ ಹತ್ತಗಿದೆ. ಈ ಹತ್ತರಲ್ಲಿ ಶ್ರೇಷ್ಟವಾದ ಲೈಲತುಲ್ ಖದ್‌ರ್ ಅಡಗಿದೆ! ಈ ಪುಣ್ಯ ರಾತ್ರಿಯಲ್ಲಿ ಪವಿತ್ರ ಖುರ್‌ಆನ್ ಅವತೀರ್ಣಗೊಂಡಿತು.
ಲೈಲತುಲ್ ಖದ್‌ರ್‌ನಂದು ನಾವು ಅವತೀರ್ಣಗೊಳಿಸಿದವು. ಆ ಕುರಿತು ತಮ್ಮ ತಿಳುವಳಿಕೆಯೇನು? ಲೈಲತುಲ್ ಖದ್‌ರ್ ಸಾವಿರ ಮಾಸಕ್ಕಿಂತಲೂ ಉತ್ತಮವಾಗಿದೆ. ಅಂದು ಜಿಬ್ರೀಲ್ ಹಾಗೂ ಇನ್ನಿತರ ದೇವಚರರು ಇಳಿದು ಬರುವರು. ಎಲ್ಲಾ ಕಾರ್ಯಚಟುವಟಿಕೆಗಳ ನಿರ್ಣಯ ಅಂದು ನಡೆಯುತ್ತದೆ. ಆ ರಾತ್ರಿಯ ಪ್ರಭಾತದವರೆಗೂ ರಕ್ಷಣೆಯಿದೆ. (ಸೂರತುಲ್ ಖದ್ರ್) ಎಂದು ಅಲ್ಲಾಹನು ಹೇಳುತ್ತಾನೆ. ಇಲಾಹಿ ಗ್ರಂಥಗಳೆಲ್ಲವೂ ರಮಳಾನ್ ಮಾಸದಲ್ಲೇ ಅವತೀರ್ಣಗೊಂಡಿತೆಂದು ಹದೀಸುಗಳಲ್ಲಿದೆ. ಇಬ್ರಾಹೀಂ ನಬಿ ಅಲೈಹಿಸ್ಸಲಾಂರಿಗೆ ಅಲ್ಲಾಹನ ದಿವ್ಯಸಂದೇಶ ಅವತೀರ್ಣಗೊಂಡಿರುವುದು ರಮಳಾನ್‌ನ ಆರಂಭಿಕ ರಾತ್ರಿಗಳಲ್ಲಾಗಿದೆ. ಇದಾಗಿ ಏಳು ನೂರು ವರ್ಷಗಳ ಬಳಿಕ ರಮಳಾನ್ ಆರನೇ ರಾತ್ರಿ ಮೂಸಾ ನಬಿ ಅಲೈಹಿಸ್ಸಲಾಂರವರಿಗೆ ತೌರಾತ್ ಅವತೀರ್ಣಗೊಂಡಿತು. ತೌರಾತ್‌ನ ನಂತರ ಐನೂರು ವರ್ಷಗಳ ಬಳಿಕ ರಮಳಾನ್ ಹನ್ನೆರಡರ ರಾತ್ರಿ ದಾವೂದ್‌ರಿಗೆ ಝಬೂರ್ ಎಂಬ ಗ್ರಂಥ ಅವತೀರ್ಣಗೊಂಡಿತು. ಇಂಜೀಲ್ ರಮಳಾನ್ ಹದಿನೆಂಟನೇ ರಾತ್ರಿ ಅವತೀರ್ಣಗೊಂಡಿತು. ಈ ಎರಡೂ ಗ್ರಂಥಗಳ ನಡುವೆ ಸಾವಿರ ವರ್ಷದ ಅಂತರವಿದೆ. ನಂತರ ಆರು ನೂರ ಇಪ್ಪತ್ತು ವರ್ಷಗಳ ಬಳಿಕ ರಮಳಾನ್ ಇಪತ್ತೇಳರಂದು ಪವಿತ್ರ ಖುರ್‌ಆನ್ ಅವತೀರ್ಣಗೊಂಡಿತು. ಈ ಶ್ರೇಷ್ಠ ರಾತ್ರಿಗೆ ಇಂತಹದೊಂದು ಹೆಸರೇಕೆ ಬಂತೆಂಬುದರ ಕುರಿತು ವಿದ್ವಾಂಸರ ನಡುವೆ ನಾನಾ ಅಭಿಪ್ರಾಯಗಳಿವೆ. ಮುಂದಿನ ಒಂದು ವರ್ಗದ ಸರ್ವ ಕಾರ್ಯ ಚಟುವಟಿಕೆಗಳನ್ನು ತೀರ್ಮಾನಿಸುವ ರಾತ್ರಿಯಾಗಿರುವುದರಿಂದ ಈ ಹೆಸರು ಬಂತೆಂಬುದು ಪ್ರಬಲ ಅಭಿಪ್ರಾಯ. ಲೈಲತುಲ್ ಖದ್‌ರ್, ಇಂತಿಂಥ ರಾತ್ರಿ ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿಲ್ಲ. ಮೊದಲು ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಆ ರಾತ್ರಿ ಯಾವಾಗ ಎಂಬ ಸಂಗತಿ ತಿಳಿದಿತ್ತು. ಅದನ್ನವರು ಸ್ವಹಾಬಿಗಳಿಗೆ ಹೇಳಲು ಬರುತ್ತಿರಬೇಕಾದರೆ ಸಾಲದ ಹೆಸರಲ್ಲಿ ಇಬ್ಬರು ಜಗಳವಾಡುತ್ತಿರುವುದು ಅವರ ಕಣ್ಣಿಗೆ ಬಿದ್ದವು. ಅವರ ಜಗಳ ಬಿಡಿಸುವ ಭರದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಆ ದಿನ ಯಾವತ್ತೆಂಬ ವಿಚಾರ ಮರೆತು ಹೋದವು. ಆ ಮರೆವು ನಿಮಗೆ ಅನುಗ್ರಹವಾಗಿದೆ ಎಂದು ಅವರು ಹೇಳಿರುವುದು ಹದೀಸ್ ಗ್ರಂಥಗಳಲ್ಲಿ ದಾಖಲಾಗಿದೆ. ಪ್ರತೀ ವರ್ಷವೂ ರಮಳಾನ್‌ನ ಕೊನೆಯ ಹತ್ತು ದಿವಸಗಳಲ್ಲಿ ಯಾವುದಾದರೊಂದು ರಾತ್ರಿ ಲೈಲತುಲ್ ಖದ್ರ್ ಆಗಿರುತ್ತದೆ ಎಂದು ವಿದ್ವಾಂಸರ ಪ್ರಬಲ ಅಭಿಪ್ರಾಯ. ಉಮರುಬ್ ನುಲ್ ಖತ್ತಾಬ್ ರಳಿಯಲ್ಲಾಹು ಅನ್‌ಹು, ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್‌ಹು, ಉಬಯ್ಯ್ಬುನು ಕಅಬ್ ರಳಿಯಲ್ಲಾಹು ಅನ್‌ಹು ಎಂಬೀ ಸ್ವಹಾಬಿಗಳು ಹಾಗೂ ಹೆಚ್ಚಿನೆಲ್ಲಾ ವಿದ್ವಾಂಸರು ಇಪ್ಪತ್ತೇಳರ ರಾತ್ರಿ ಲೈಲತುಲ್ ಖದ್ರ್‌ನ ರಾತ್ರಿಯಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರ ಮಾನದಂಡವಾಗಿ ಅವರು ಹೇಳುವುದಿಷ್ಟೆ. “ಲೈಲತುಲ್ ಖದ್ರ್” ಎಂಬ ಪದ ಮೇಲೆ ಸೂಚಿಸಿದ ಸೂರತ್ ನಲ್ಲಿ ಮೂರು ಬಾರಿ ಬಂದಿದೆ. ಲೈಲತುಲ್ ಖದ್ರ್ ಎಂಬ ಪದದಲ್ಲಿ ಒಂಬತ್ತು ಅಕ್ಷರಗಳಿವೆ. ಆದ್ದರಿಂದ ಮೂರು ಬಾರಿ ಹೇಳಿದ ಲೈಲತುಲ್ ಖದ್ರ್‌ನ ಒಟ್ಟು ಅಕ್ಷರಗಳ ಮೊತ್ತ ಇಪ್ಪತ್ತೇಳಾಗುತ್ತದೆ. ಪ್ರಸಿದ್ಧ ಸೂಫಿವರ್ಯ ಸಬೂಉಝೀದುಲ್ ಬಿಸ್ತ್ವಾಮಿ ರಳಿಯಲ್ಲಾಹು ಅನ್‌ಹು ಮೂರು ಬಾರಿ ಲೈಲತುಲ್ ಖದ್ರ್‌ನ್ನು ಎದುರುಗೊಂಡಿದ್ದಾರೆ. ಈ ಮೂರೂ ಇಪ್ಪತ್ತೇಳರಂದು ಸಂಭವಿಸಿದೆ.
ಇಮಾಮ್ ಮುಸ್‌ನಿ, ಇಬ್ನು ಖುಸೈಮ, ಇಮಾಮ್ ನವವೀ ಮೊದಲಾದವರು ಪ್ರತೀ ವರ್ಷವೂ ಬೇರೆ ಬೇರೆ ದಿನಗಳಲ್ಲಿ ಲೈಲತುಲ್ ಖದ್ರ್ ಸಂಭವಿಸುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಲೈಲತುಲ್ ಖದ್ರ್ ಸಂಭವಿಸಿರುವುದರ ಲಕ್ಷಣಗಳೇನೆಂದು ಪರಿಶೀಲಿಸೋಣ. ಆ ರಾತ್ರಿ ಪ್ರಬಲ ಉಷ್ಣ ಹಾಗೂ ಶೀತದ ಅನುಭವವಾಗುವುದಿಲ್ಲ. ನಕ್ಷತ್ರಗಳು ಕಾಣಿಸಿಕೊಳ್ಳುವುದಿಲ್ಲ. ಮರುದಿನ ಸೂರ್ಯೋದಯ ಸಂದರ್ಭದಲ್ಲಿ ಸಾಮಾನ್ಯ ಕಿರಣಗಳಿರುವುದಿಲ್ಲ. ದೇವಚರರ ಸಾನಿಧ್ಯದ ಕಾರಣದಿಂದ ಸೂರ್ಯ ಪ್ರಭೆ ಭೂಮಿಗೆ ಸರಿಯಾಗಿ ಬೀಳುವುದಿಲ್ಲ.
ಇಷ್ಟೆಲ್ಲಾ ಮಹತ್ವಗಳಿರುವ ರಾತ್ರಿಯನ್ನು ಯಾಕೆ ಸ್ಪಷ್ಟಪಡಿಸಲಿಲ್ಲ ಎಂಬ ಸಂಶಯ ಕೆಲವರಲ್ಲಿರಬಹುದು. ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾದ ಈ ಒಂದು ರಾತ್ರಿಯನ್ನು ಆಶಿಸಿ ಸದಾ ಸೂಕ್ಷ್ಮಚಿತ್ತರಾಗಿ ಚಾಗರೂಕತೆಯಿಂದ ಜೀವಿಸಲು, ಆರಾಧನಾ ಕರ್ಮಗಳನ್ನು ಹೆಚ್ಚಿಸಲು ಪ್ರಚೋದನೆ ನೀಡುವ ಉದ್ದೇಶದಿಂದ ಈ ರಾತ್ರಿಯನ್ನು ಹೀಗೆ ಅಸ್ಪಷ್ಟವಾಗಿರಿಸಲಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ.

ಕೆಎಂ ಜಲೀಲ್ ಕುಂದಾಪುರ

ಅಲ್ಲಾಹನು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ವಿಪತ್ತುಗಳಿಂದ ನಮ್ಮನ್ನು ಕಾಪಾಡಲಿ
آمیـــــــــــــن یارب العالمین ದುಆಃ ಇರಲಿ ಸದಾಃ

𝗡𝗢𝗢𝗥𝗨𝗟𝗙𝗔𝗟𝗔𝗛 𝗙𝗢𝗨𝗡𝗗𝗔𝗧𝗜𝗢𝗡(𝗥)

Leave a Comment

Your email address will not be published. Required fields are marked *

You cannot copy content of this page